ಖಾರ್ಕಾಫ್

	ಸೋವಿಯೆತ್ ದೇಶದ ಉಕ್ರೇನಿಯನ್ ಸೋವಿಯೆತ್ ಸಮಾಜವಾದಿ ಗಣರಾಜ್ಯದಲ್ಲಿಯ ಒಂದು ನಗರ, ಅಬ್ಲಾಸ್ಟ್ (ಆಡಳಿತವಿಭಾಗ) ಕೇಂದ್ರ. ಮಾಸ್ಕೋಗೆ ದಕ್ಷಿಣ-ನೈಋತ್ಯದಲ್ಲಿ 400 ಮೈ. ದೂರದಲ್ಲಿ, ಲೋಪಾನ್ ಮತ್ತು ಖಾರ್ಕಾಫ್ ನದಿಗಳ ಸಂಗಮದ ಬಳಿ ಸುಮಾರು ಇಪ್ಪತ್ತು ಉಪನಗರಗಳಿಂದ ಕೂಡಿರುವ ಇದರ ಜನಸಂಖ್ಯೆ 9,34,136 (1959).

	ರಷ್ಯದ ದಕ್ಷಿಣದ ಗಡಿನೆಲದ ರಕ್ಷಣೆಯ ಉದ್ದೇಶದಿಂದ 1656ರಲ್ಲಿ ಈ ನಗರವನ್ನು ನಿರ್ಮಿಸಲಾಯಿತು. 18ನೆಯ ಶತಮಾನದಲ್ಲಿ ಇದು ವ್ಯಾಪಾರ ಕೈಗಾರಿಕಾ ಕೇಂದ್ರವಾಗಿ ಬೆಳೆಯಿತು. 1732ರಲ್ಲಿ ಪ್ರಾಂತೀಯ ಕೇಂದ್ರವಾಯಿತು. 19ನೆಯ ಶತಮಾನದಲ್ಲಿ ಇಲ್ಲಿ ಕೈಗಾರಿಕೆಗಳು ಶೀಘ್ರವಾಗಿ ಅಭಿವೃದ್ಧಿ ಹೊಂದಿದುವು. ರಷ್ಯನ್ ಕ್ರಾಂತಿಯ ವೇಳೆಗೆ ಇದು ರಷ್ಯದ ಐದನೆಯ ದೊಡ್ಡ ನಗರವಾಗಿ ಪರಿಣಮಿಸಿತ್ತು. ಉಕ್ರೇನಿಯನ್ ಗಣರಾಜ್ಯ ಸ್ಥಾಪನೆಯಾದಾಗಿನಿಂದ (1917) 1934ರವರೆಗೆ ಆ ರಾಜ್ಯದ ರಾಜಧಾನಿಯಾಗಿತ್ತು. ಕ್ರಾಂತಿಯ ಅನಂತರವೂ ಖಾರ್ಕಾಫಿನ ಬೆಳವಣಿಗೆ ನಿಲ್ಲಲಿಲ್ಲ. ಎರಡನೆಯ ಮಹಾಯುದ್ಧದ ಕಾಲದಲ್ಲಿ ಇದಕ್ಕೆ ಅಗಾಧ ನಷ್ಟ ಸಂಭವಿಸಿದರೂ ಯುದ್ಧಾನಂತರದಲ್ಲಿ ಚೇತರಿಸಿಕೊಂಡಿತು. ಈ ನಗರದಲ್ಲಿ ಅದುರು ಕರಗಿಸುವುದು, ಎಂಜಿನ್, ಟ್ರಾಕ್ಟರ್, ಬೈಸಿಕಲ್, ಕೃಷಿ ಉಪಕರಣ, ವಿದ್ಯುತ್ ಸಲಕರಣೆ ಹಾಗೂ ಜಲವಿದ್ಯುತ್ ಉತ್ಪಾದಕ ಯಂತ್ರ ತಯಾರಿಕೆ ಮುಂತಾದ ಬಣ್ಣ, ಬಿಸ್ಕತ್, ಹಿಟ್ಟು, ಜವಳಿ-ಇವು ಇಲ್ಲಿಯ ಇತರ ಕೆಲವು ಮುಖ್ಯ ಕೈಗಾರಿಕೆಗಳು.

	ಖಾರ್ಕಾಫ್ ಸೋವಿಯೆತ್ ದೇಶದ ಮೂರನೆಯ ದೊಡ್ಡ ರೈಲ್ವೆ ಜಂಕ್ಷನ್ (ಮೊದಲಿನ ಎರಡು ಮಾಸ್ಕೋ ಮತ್ತು ಲೆನಿನ್ ಗ್ರಾಡ್). ಮಾಸ್ಕೋ, ಕೀಯೆಫ್, ಒಡೆಸ್ಸ, ಬಾಕೂ ಇವುಗಳೊಂದಿಗೂ ಇತರ ಮುಖ್ಯ ನಗರಗಳೊಂದಿಗೂ ಸಂಬಂಧ ಕಲ್ಪಿಸುವ ಅನೇಕ ಹೆದ್ದಾರಿಗಳು ಇದರ ಮೂಲಕ ಹಾಯ್ದುಹೋಗುತ್ತವೆ. ವಿಮಾನ ಸಂಪರ್ಕವೂ ಉಂಟು.

	ಖಾರ್ಕಾಫ್ ಒಂದು ಮುಖ್ಯ ಸಾಂಸ್ಕøತಿಕ ಮತ್ತು ಶಿಕ್ಷಣ ಕೇಂದ್ರ. ಇಲ್ಲಿಯ ಎ.ಎಂ. ಗಾರ್ಕಿ ವಿಶ್ವವಿದ್ಯಾಲಯ 1805ರಲ್ಲಿ ಸ್ಥಾಪಿತವಾದದ್ದು. ಇಲ್ಲಿ ಉನ್ನತ ಶಿಕ್ಷಣ ಸಂಶೋಧನ ಕೇಂದ್ರಗಳೂ ಇವೆ. ಸಂಗೀತ ಭವನ, ನಾಟ್ಯಶಾಲೆಗಳು, ವಸ್ತು ಸಂಗ್ರಹಾಲಯಗಳು-ಇವು ಇತರ ಆಕರ್ಷಣೆಗಳು.
				 (ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ